Dr. Syama Prasad Mookerjee Research Foundation

ಮುಸ್ಲಿಂ ಹೆಂಗಳೆಯರ ಬದುಕಿಗೆ ಬೆಳಕು ತಂದ ತ್ರಿವಳಿ ತಲಾಖ್ ರದ್ದತಿ

ದೇಶದಲ್ಲಿ ಮುಸ್ಲಿಮರು ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಗಳ ಕುರಿತು ಅತಿ ಹೆಚ್ಚು ವಿಶ್ಲೇಷಣೆಗಳು ನಡೆಯುತ್ತವೆ. ಬಿಜೆಪಿ ಹಿಂದೂಗಳ ಹಿತವನ್ನು ಮಾತ್ರ ಕಾಯುತ್ತದೆ; ಮುಸ್ಲಿಮರನ್ನು ದ್ವೇಷಿಸುತ್ತದೆ; ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಮುಸ್ಲಿಮರಿಗೆ ರಕ್ಷಣೆಯಿರುವುದಿಲ್ಲ.. ಇತ್ಯಾದಿ ವಾದಗಳನ್ನು ಮುಂದಿಡಲಾಗುತ್ತದೆ. ಮೋದಿಯವರನ್ನಂತೂ ಮುಸ್ಲಿಮರ ಬದ್ಧ ವೈರಿಯೆಂಬಂತೆಯೇ ಚಿತ್ರಿಸಿಕೊಂಡು ಬರಲಾಗಿದೆ. ಆದರೆ ಮೋದಿ ಸರ್ಕಾರದ ಯೋಜನೆಗಳನ್ನು, ಅದರ ನೀತಿ-ಧೋರಣೆಗಳನ್ನು ಯಾವುದೇ ಪೂರ್ವಗ್ರಹವಿಲ್ಲದೆ ವಿಶ್ಲೇಷಿಸಿದರೆ ಬೇರೆಯೇ ಆದೊಂದು ಅಭಿಪ್ರಾಯ ನಮ್ಮದಾಗುತ್ತದೆ. ಏಕೆಂದರೆ ಮೋದಿಯವರು ಪ್ರಧಾನಿಯಾದ ನಂತರದ ಈ ಹತ್ತು ವರ್ಷಗಳಲ್ಲಿ ಮುಸ್ಲಿಮರ ಹಿತಕ್ಕೆ ಪೂರಕವಾದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಸ್ಲಿಮರನ್ನು ಸಾಕ್ಷರರನ್ನಾಗಿಸುವ, ಅವರನ್ನು ಮಧ್ಯಯುಗೀನ ಆಚರಣೆಗಳಿಂದ ಹೊರತಂದು ಸಮಾಜದ ಮುಖ್ಯವಾಹಿನಿಯಲ್ಲಿ ಜೋಡಿಸಿಕೊಳ್ಳುವ, ಅವರ ಜೀವನಮಟ್ಟವನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಮೋದಿ ಸರ್ಕಾರ ಹೆಜ್ಜೆಯನ್ನಿಟ್ಟಿದೆ. ‘ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ವಾಸಿಸುತ್ತಾರೆ’ (ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ) ಎಂಬ ನಮ್ಮ ಪುರಾತನ ನಂಬಿಕೆಯಂತೆ ಮುಸ್ಲಿಂ ಸಮಾಜದ ಹೆಣ್ಣುಮಕ್ಕಳು ಉಳಿದ ಹೆಣ್ಣುಮಕ್ಕಳಂತೆಯೇ ಗೌರವಯುತ ಜೀವನವನ್ನು ನಡೆಸುವಂತಾಗಬೇಕು ಎಂಬ ಬಲವಾದ ಇಚ್ಛೆಯನ್ನು ಮೋದಿ ಸರ್ಕಾರ ತೋರ್ಪಡಿಸಿದೆ. ಆ ಇಚ್ಛೆಯ ಸಾಕಾರಕ್ಕಾಗಿ ಯಾರೂ ಊಹಿಸದಂಥ, ಅತ್ಯಂತ ಸವಾಲಿನ, ದಿಟ್ಟ ಹೆಜ್ಜೆಯನ್ನಿಟ್ಟು ಯಶಸ್ಸನ್ನೂ ಪಡೆದುಕೊಂಡಿದೆ. ಮೋದಿ ಸರ್ಕಾರದ ಆ ಯಶಸ್ವೀ ಹೆಜ್ಜೆಯೇ ತ್ರಿವಳಿ ತಲಾಖ್ ರದ್ದತಿ!

ಮುಸ್ಲಿಂ ಹೆಣ್ಣುಮಕ್ಕಳ ಬದುಕನ್ನು ಅಕ್ಷರಶಃ ನರಕವಾಗಿಸಿದ್ದ ತ್ರಿವಳಿ ತಲಾಖ್ ಪದ್ಧತಿ ರದ್ದಾಗಿ ವರ್ಷಗಳು ಕಳೆದಿವೆೆ. ಈ ವರ್ಷಗಳಲ್ಲಿ ಅನೇಕ ಮುಸ್ಲಿಂ ಹೆಂಗಳೆಯರ ಬದುಕಿನ ಬಂಡಿ ಮುಂದಕ್ಕೆ ಚಲಿಸಿದೆ. ಅದೆಷ್ಟೋ ಲಕ್ಷ ಹೆಣ್ಣುಮಕ್ಕಳು ಅತಂತ್ರ ಬದುಕಿನ ದವಡೆಯಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅನ್ಯಾಯ, ಅನಿಶ್ಚಿತತೆ, ಕಳವಳ, ಆತಂಕಗಳಿಂದ ಹೊರಬಂದು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದಾರೆ. ಇದಕ್ಕೆ ಕಾರಣವಾದದ್ದು ಇದೇ ಮೋದಿ ಸರ್ಕಾರ ಜಾರಿಗೆ ತಂದ ತಲಾಖ್ ರದ್ದತಿ! ಇದೊಂದು ಕಾನೂನು ಸಮಾಜದಲ್ಲಿ ಏನೆಲ್ಲ ಪರಿವರ್ತನೆಗಳನ್ನು ತಂದಿತು ಎಂಬುದನ್ನು ಅರಿಯಬೇಕಾದರೆ, ಮುಸ್ಲಿಂ ಸಹೋದರಿಯರ ಈ ಹಿಂದಿನ ಕಷ್ಟದ ದಿನಗಳನ್ನು ಅವಲೋಕಿಸಬೇಕು. ಇಲ್ಲಿ ಉಲ್ಲೇಖಿಸಿದ ಕೆಲವು ಘಟನೆಗಳು ಕೇವಲ ಐದು ವರ್ಷಗಳ ಹಿಂದೆ ನಮ್ಮ ಸಮಾಜದಲ್ಲಿ ನಡೆಯುತ್ತಿದ್ದಂಥವುಗಳು.

ಹೈದರಾಬಾದ್ ಹಳೆ ನಗರದ ನಿವಾಸಿ 31 ವರ್ಷದ ಗೌಸಿಯಾ ಬೇಗಂ ಇಬ್ಬರು ಮಕ್ಕಳ ತಾಯಿ. ಮದುವೆಯಾಗಿ ಅನ್ಯೋನ್ಯತೆಯಿಂದ ಇದ್ದ ಸುಖೀ ಕುಟುಂಬ. ಗೌಸಿಯಾಳ ಗಂಡ ಒಮಾನ್ ದೇಶದಲ್ಲಿದ್ದ. ಎಲ್ಲವೂ ಚೆನ್ನಾಗಿಯೇ ಇದ್ದ ಕುಟುಂಬದಲ್ಲಿ ಇದ್ದಕ್ಕಿದ್ದಂತೆ ಒಂದು ದಿನ ಗಂಡ ಜಹಾರ್ ಹಮೆದ್ ಅಲ್ ರಾಜಿ ಪತ್ನಿಗೆ ಫೋನ್ ಮಾಡಿ ಮೂರು ಬಾರಿ ತಲಾಖ್, ತಲಾಖ್, ತಲಾಖ್ ಎಂದ. ಎರಡೇ ನಿಮಿಷದ ಫೋನಿನಲ್ಲಿ ಆಕೆಯ ಬದುಕು ಮೂರಾಬಟ್ಟೆಯಾಯಿತು. ಗೌಸಿಯಾ ಸಮೀಪದ ಮೌಲ್ವಿಯ ಬಳಿಗೆ ಹೋದಳು. ಮೌಲ್ವಿ ಗಂಡನೊಡನೆ ಚರ್ಚಿಸಿದಾಗ ಆತನಿಗೆ ಆಕೆಯ ಚಾರಿತ್ರ‍್ಯದ ಬಗ್ಗೆ ಸಂಶಯವಿರುವುದಾಗಿಯೂ, ತಾನು ಆಕೆಗೆ ಇಸ್ಲಾಂ ಪ್ರಕಾರ ವಿಚ್ಛೇದನವನ್ನು ನೀಡಿರುವುದಾಗಿಯೂ ತಿಳಿಸಿದ. ಮೌಲ್ವಿಗಳು ಇಸ್ಲಾಂ ನಿಯಮದ ಪ್ರಕಾರವೇ ಎಲ್ಲವೂ ನಡೆದಿದೆ, ಇನ್ನು ನೀವಿಬ್ಬರು ಗಂಡ ಹೆಂಡತಿಯರಲ್ಲ ಎಂದು ತೀರ್ಪು ಕೊಟ್ಟರು.

ಉತ್ತರ ಪ್ರದೇಶದ ಲಕ್ನೋದ ಮುಮ್ತಾಜ್‌ಗೆ ಆಕೆಯ ಪೋಷಕರು 17ನೇ ವರ್ಷಕ್ಕೇ ವಿವಾಹ ಮಾಡಿಕೊಟ್ಟಿದ್ದರು. ಮದುವೆ ಸಮಯದಲ್ಲಿ ಆಕೆ ಕಾಲೇಜಿಗೆ ಹೋಗುತ್ತಿದ್ದಳು. ಮದುವೆಯ ನಂತರ ಗಂಡ ತಮ್ಮ ಮನೆಯ ಸಂಪ್ರದಾಯದಂತೆ ಹೆಣ್ಣುಮಕ್ಕಳು ಓದುವುದು ನಿಷಿದ್ಧ ಎಂಬ ಷರತ್ತು ಒಡ್ಡಿದ. ಆದರೆ ಮುಮ್ತಾಜ್ ತಾನು ಓದಲೇಬೇಕೆಂದು ಪಟ್ಟುಹಿಡಿದಳು. ಅಷ್ಟಕ್ಕೇ ಗಂಡ ಆಕೆಯೆದುರು ನಿಂತು ಮೂರು ಬಾರಿ ತಲಾಖ್ ಎಂದ. ಮದುವೆ ಮುರಿದುಬಿತ್ತು.

ಉತ್ತರ ಪ್ರದೇಶದ ಬುಲಂದ್ ಶಹರ್ ಪಟ್ಟಣದ 24 ವರ್ಷದ ಯುವತಿಯೊಬ್ಬಳನ್ನು ವರದಕ್ಷಿಣೆ ತರಲಿಲ್ಲವೆಂದು ಅತ್ತೆ ಮಾವಂದಿರು ಸೇರಿ ಗಂಡನ ಮೇಲೆ ಒತ್ತಡ ತಂದು ಮೂರು ಬಾರಿ ತಲಾಖ್ ಹೇಳಿಸಿದರು. ಯುವತಿ ಪೊಲೀಸ್ ಠಾಣೆಗೆ ತೆರಳಿ ಗಂಡನ ಮನೆಯವರ ಮೇಲೆ ವರದಕ್ಷಿಣೆ ಮೊಕದ್ದಮೆ ದಾಖಲಿಸಬೇಕೆಂದು ಕೇಳಿಕೊಂಡಳು. ಪೊಲೀಸರು ಇದಾಗಲೇ ದಾಂಪತ್ಯ ಮುರಿದುಬಿದ್ದಿದೆ, ವಿಚ್ಛೇದನವಾಗಿದೆ ಎಂದು ಆಕೆಯನ್ನು ಕಳುಹಿಸಿದರು!

ಹೈದರಾಬಾದಿನ 27 ವರ್ಷದ ನಿಹಾರ ಎನ್ನುವ ಯುವತಿಗೆ ಮದುವೆಯಾದ ಇಪ್ಪತ್ತೈದೇ ದಿನಕ್ಕೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಲಾಯಿತು. ಕಾರಣ ಆಕೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್ ಅನ್ನು ಮುಚ್ಚಬೇಕೆಂದು ಗಂಡ ಷರತ್ತು ಒಡ್ಡಿದ್ದ.

ರಾಜ್ ಕೋಟ್‌ನಲ್ಲಿ 23 ವರ್ಷದ ಮಹಿಳೆಯೊಬ್ಬಳ ಮೇಲೆ ಗಂಡ ಮಾರಣಾಂತಿಕ ಹಲ್ಲೆ ನಡೆಸಿದ. ಆಕೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದಳು. ವಿಚಾರಣೆಗೆಂದು ಠಾಣೆಗೆ ಬಂದ ಗಂಡ ಪೊಲೀಸ್ ಠಾಣೆಯಲ್ಲಿ ಮೂರು ಬಾರಿ ತಲಾಖ್ ಪಠಿಸಿ ಪತ್ನಿಗೆ ವಿಚ್ಛೇದನ ನೀಡಿದ. ಕಾನೂನು ಪಾಲನೆ ಮಾಡುವವರ ಮುಂದೆಯೇ ಶತಮಾನಗಳ ನಿಯಮ ಗೆದ್ದಿತು.

ಈ ಎಲ್ಲಾ ಘಟನೆಗಳು ಸಮಾನತೆಯ ಆಶಯವನ್ನು ಹೊತ್ತ ಸಂವಿಧಾನದ ಮೂಗಿನ ಕೆಳಗೇ ನಡೆದವುಗಳು ಎಂಬುದು ವಿಶೇಷ! ಕಾಲಬಾಹಿರ ಮತ್ತು ಅಮಾನವೀಯವಾದ ಇಂಥ ಕಾನೂನುಗಳನ್ನು ಒಂದು ಮತೀಯ ಆಚರಣೆಗಳ ನೆಲೆಗಟ್ಟಿನಲ್ಲಿ ಪಾಲಿಸಲಾಗುತ್ತಿತ್ತು. ಸ್ವಾತಂತ್ರ‍್ಯ ಲಭಿಸಿ 7 ದಶಮಾನಗಳವರೆಗೂ ಇಂಥ ನಿಯಮಗಳನ್ನು ಓಲೈಕೆಯ ರಾಜಕಾರಣ ಇನ್ನೂ ಜೀವಂತವಾಗಿಟ್ಟಿತ್ತು. ಮುಸಲ್ಮಾನ ಮಹಿಳೆಯರ ಕಣ್ಣೀರನ್ನು ಒರೆಸುವ ಎಲ್ಲಾ ಸಾಧ್ಯತೆಗಳು ಸರ್ಕಾರಗಳಿಗಿದ್ದರೂ ವೋಟ್ ಬ್ಯಾಂಕ್ ಭಯದಿಂದ ಈ ತ್ರಿವಳಿ ತಲಾಖನ್ನು ರದ್ದು ಮಾಡುವ ಗೊಡವೆಗೆ ಯಾರೂ ಹೋಗಿರಲಿಲ್ಲ. ಆದರೆ ಈ ಎಲ್ಲಾ ಸರ್ಕಾರಗಳು ಮುಸಲ್ಮಾನರ ಮೇಲೆ ಇನ್ನಿಲ್ಲದ ಪ್ರೀತಿಯನ್ನು ತೋರುವ ನಾಟಕವನ್ನು ಆಡುತ್ತಿದ್ದವು.

ಮದುವೆಯ ಪಾವಿತ್ರ‍್ಯಕ್ಕೆ ಧಕ್ಕೆ ತರುವಂಥ ಯಾವ ನಿಯಮಗಳನ್ನೂ ಯಾವ ಮತಾಚರಣೆಗಳೂ ಒಪ್ಪುವುದಿಲ್ಲ. ಏಕೆಂದರೆ ವಿವಾಹಬಂಧವೆಂದರೆ ಸಮಾಜವೊಂದರ ಗಟ್ಟಿ ವ್ಯವಸ್ಥೆ. ಯಾವ ಸಮಾಜದಲ್ಲಿ ವಿವಾಹ ಸಂಬಂಧಗಳು ದುರ್ಬಲವಾಗುತ್ತವೋ ಅಂಥ ಸಮಾಜ ದುರ್ಬಲವಾಗುತ್ತದೆ. ಆ ಕಾರಣಕ್ಕಾಗಿ ವಿಶ್ವದ ಎಲ್ಲಾ ಸಮಾಜಗಳು ವಿವಾಹ ಮತ್ತು ವಿವಾಹಾನಂತರದ ಕಾನೂನುಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತವೆ. ಒಂದು ಕಾಲದಲ್ಲಿ ವಿವಾಹಗಳನ್ನೇ ನಿರಾಕರಿಸಿದ ಕಮ್ಯುನಿಸಂ ಕೂಡ ಅದರ ಪಾರ್ಶ್ವಪರಿಣಾಮಗಳಿಂದ ಪಾಠ ಕಲಿಯಿತು. ಇಸ್ಲಾಂ ಸಮಾಜ ಕೂಡ ಮಧ್ಯಪ್ರಾಚ್ಯದ ದೇಶಗಳಲ್ಲೇ ತ್ರಿವಳಿ ತಲಾಖಿನಂಥ ಕ್ರೂರ ನಿಯಮಗಳನ್ನು ಪಾಲಿಸುತ್ತಿಲ್ಲ. ಆದರೆ ಭಾರತೀಯ ಮುಸಲ್ಮಾನರು ತಮ್ಮ ಪುರುಷ ಪಾರಮ್ಯಕ್ಕಾಗಿಯೋ ಅಥವಾ ಬಹುಪತ್ನಿತ್ವದ ಲಾಲಸೆಗಾಗಿಯೋ ತ್ರಿವಳಿ ತಲಾಖಿನಂಥ ವಿಕೋಪದ ನಿಯಮಗಳನ್ನು ಪಾಲಿಸುತ್ತಲೇ ಬಂದರು. ಆ ಮೂಲಕ ಮುಸಲ್ಮಾನ ಮಹಿಳೆಯರನ್ನು ವ್ಯವಸ್ಥೆ ಶತಮಾನಗಳ ಹಿಂದಿನ ಗುಲಾಮಗಿರಿಯ ಸ್ಥಿತಿಯಲ್ಲೇ ಇಟ್ಟಿತ್ತು. ಹೆಣ್ಣನ್ನು ಕೇವಲ ಹೆರುವ ಯಂತ್ರಗಳೆಂದು ಪರಿಗಣಿಸುವ ಮಾನಸಿಕತೆಯನ್ನು ಈ ನಿಯಮಗಳು ಮತ್ತಷ್ಟು ಬಲಪಡಿಸಿದ್ದವು. ಹೆಣ್ಣಿಗೂ ಒಂದು ಮನಸ್ಸಿದೆ, ಸಂವೇದನೆಯಿದೆ ಎಂಬ ಉದಾರತೆಯನ್ನು ಮುಸಲ್ಮಾನ ಪುರುಷಸಮಾಜ ಪರಿಗಣಿಸುವ ಸಾಧ್ಯತೆಗಳನ್ನೇ ಸರ್ಕಾರಗಳು ಕಿತ್ತುಹಾಕಿದ್ದವು. ಆ ಕಾರಣದಿಂದ ಮುಸಲ್ಮಾನ ಸಮಾಜದ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗದೆ, ಉಳಿದ ಸಮಾಜದ ಹೆಣ್ಣುಮಕ್ಕಳಂತೆ ಸಬಲೆಯರಾಗದೆ, ಅವ್ಯಕ್ತವಾದ ಆತಂಕದಿಂದಲೇ ಬದುಕುವ ಸ್ಥಿತಿ ನಿರ್ಮಾಣಯಿತು. ಇಲ್ಲಿ ಮೇಲೆ ಉಲ್ಲೇಖಿಸಿರುವಂಥ ಸಾವಿರಾರು ಪ್ರಕರಣಗಳು ದೇಶದ ದೊಡ್ಡ ಮಹಾನಗರಗಳಿಂದ ಹಿಡಿದು ಸಣ್ಣ ಸಣ್ಣ ಊರುಗಳಲ್ಲೂ ನಡೆಯುತ್ತಿದ್ದವು.

ಒಂದೆಡೆ ಜಗತ್ತು ಆಧುನಿಕತೆಗೆ ಒಡ್ಡಿಕೊಂಡು, ಜಾಗತೀಕರಣಕ್ಕೆ ತೆರೆದುಕೊಂಡ ಹೊತ್ತಲ್ಲೂ ಇಂಥ ಅಮಾನವೀಯವಾದ ನಿಯಮಗಳು ಮುಸಲ್ಮಾನ ಸಮಾಜವನ್ನು ಕತ್ತಲಲ್ಲಿಟ್ಟಿದ್ದವು. ನೂರಾರು ಕನಸುಗಳನ್ನು ಕಟ್ಟಿ, ಹುಟ್ಟಿದ ಮನೆಯಿಂದ ಗಂಡನ ಮನೆಗೆ ಬಂದ ಅವೆಷ್ಟೋ ಹೆಣ್ಣುಮಕ್ಕಳ ಪ್ರತಿಭೆ ತಲಾಖ್ ಪದ್ಧತಿಯಿಂದ ನಾಶವಾಯಿತು. ಅವರೆಲ್ಲ ಸುಂದರ ಕುಟುಂಬ ಕಟ್ಟುವ ಅವಕಾಶದಿಂದ ವಂಚಿತರಾದರು. ಕ್ಷುಲ್ಲಕ ಕಾರಣಗಳಿಂದ ತಲಾಖ್ ಪಡೆದ ಅನೇಕ ಮಹಿಳೆಯರ ಬದುಕು ಅತಂತ್ರವಾಗಿ, ಅವೆಷ್ಟೋ ಮಹಿಳೆಯರು ವೇಶ್ಯಾವಾಟಿಕೆಗೆ ಇಳಿದರು! ಅನೇಕರು ಬದುಕಿಗೆ ಬೇರೆ ನೆಲೆಯಿಲ್ಲದೆ ಆತ್ಮಹತ್ಯೆಗೆ ಕೊರಳೊಡ್ಡಿದರು. ಇಂಥ ಸಾವಿರಾರು ಹೆಣ್ಣುಮಕ್ಕಳ ಬಾಳಿಗೆ ಬೆಳಕಿನಂತೆ ಬಂದವರು ಪ್ರಧಾನಿ ನರೇಂದ್ರ ಮೋದಿಯವರು. ತುಷ್ಟೀಕರಣ ರಾಜಕೀಯಕ್ಕೆ ಸೆಡ್ಡು ಹೊಡೆಯಬಲ್ಲ ಧೀಮಂತ ನಾಯಕ ಮಾತ್ರ ತ್ರಿವಳಿ ತಲಾಖಿನಂಥ ಕ್ರೂರ ನಿಯಮದ ವಿರುದ್ಧ ಕ್ರಮ ಕೈಗೊಳ್ಳಬಲ್ಲ ಎಂಬುದನ್ನು ನರೇಂದ್ರ ಮೋದಿಯವರು ತೋರಿಸಿಕೊಟ್ಟರು. ಪ್ರಬಲ ಹಿಂದುತ್ವವಾದಿ ಎಂಬ ಹಣೆಪಟ್ಟಿ ಕಟ್ಟಲ್ಪಟ್ಟಿದ್ದ ನಾಯಕನೊಬ್ಬನಿಂದಲೇ ಮುಸಲ್ಮಾನ ಮಹಿಳೆಯರ ಒಳ್ಳೆಯ ದಿನಗಳ ಆರಂಭವಾದವು. ತ್ರಿವಳಿ ತಲಾಖ್ ಎಂಬ ನಿಯಮಯನ್ನು ಆಚರಿಸುತ್ತಾ, ಮುಂದುವರಿಸುತ್ತಾ ಇದ್ದರೆ ಭಾರತವನ್ನು ಎಂದಿಗೂ ಪ್ರಬಲ ರಾಷ್ಟ್ರವನ್ನಾಗಿ, ಜಗತ್ತಿನ ಪ್ರಬಲ ಶಕ್ತಿಗಳ ಜೊತೆಗೆ ಸಾಗಬಲ್ಲ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ದೃಢ ನಿರ್ಧಾರವನ್ನು ಮೋದಿಯವರು ಕೈಗೊಂಡರು.

ಹಲವು ದಶಕಗಳಿಂದ ಮುಸಲ್ಮಾನ ಮಹಿಳೆಯರ ಬೇಡಿಕೆಯಾಗಿದ್ದ ತಲಾಖ್ ನಿಷೇಧ ಕಾಯ್ದೆಯನ್ನು ಶೀಘ್ರದಲ್ಲಿ ಜಾರಿಗೆ ತರಲು ಮೋದಿಯವರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದರು. ದುರದೃಷ್ಟವೆಂದರೆ ಸಮಾಜವನ್ನು ಸದೃಢಗೊಳಿಸಬಲ್ಲ, ಮುಸಲ್ಮಾನ ಹೆಣ್ಣುಮಕ್ಕಳ ಬದುಕಿಗೆ ಭದ್ರತೆಯನ್ನು ಒದಗಿಸಬಲ್ಲ ಇಂಥ ಬಹುಮುಖ್ಯ ಕಾಯಿದೆಯನ್ನೇ ವಿರೋಧ ಪಕ್ಷಗಳು ವಿರೋಧಿಸಿದವು. ಮುಸಲ್ಮಾನ ಮತಗಳನ್ನು ಸೆಳೆಯುವುದಕ್ಕಾಗಿ ಮತ್ತು ಮುಸಲ್ಮಾನರನ್ನು ಕತ್ತಲಲ್ಲೇ ಇಡುವ ಮೂಲಕ ತಮ್ಮ ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುವುದಕ್ಕಾಗಿ ತಲಾಖ್ ನಿಷೇಧವನ್ನು ಖಂಡಿಸುತ್ತಲೇ ಬಂದವು. ಹಾಗಾಗಿ ಕಾಯಿದೆಯ ಜಾರಿಗೆ ಸಾಕಷ್ಟು ತೊಡಕುಗಳು ಉಂಟಾದವು. ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗುವಲ್ಲಿ ಹಲವಾರು ಅಡೆತಡೆಗಳು ಅಡ್ಡ ಬಂದವು. ಇಷ್ಟಾದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ನಿರಂತರ ಪ್ರಯತ್ನದಿಂದ ಕಾಯಿದೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಯಿತು. ತ್ರಿವಳಿ ತಲಾಖ್ ಕಾಯಿದೆ 2019 (ವಿವಾಹ ಹಕ್ಕುಗಳ ಸಂರಕ್ಷಣಾ ಕಾಯಿದೆ) ಹಲವು ಸಂಸದೀಯ ತೊಡಕುಗಳ ನಡುವೆಯೂ ಜಾರಿಗೆ ಬಂದು ಭಾರತೀಯ ಸಮಾಜಜೀವನದಲ್ಲೇ ಒಂದು ಮಹತ್ತ್ವದ ಮೈಲುಗಲ್ಲೆನಿಸಿತು.

ತ್ರಿವಳಿ ತಲಾಖ್ ಕಾಯಿದೆಯಿಂದ ಮುಸಲ್ಮಾನ ಪುರುಷರು ಮೂರು ಬಾರಿ ತಲಾಖ್ ಹೇಳಿ ಪತ್ನಿಯರಿಗೆ ವಿಚ್ಛೇದನ ಕೊಡುವುದು ಶಿಕ್ಷಾರ್ಹವೆನಿಸಿತು. ಮಾತಿನ ಮೂಲಕ, ಬರಹದ ಮೂಲಕ, ಮೆಸೆಜ್, ಇಮೇಲ್‌ಗಳ ಮೂಲಕ ಬೇಕಾದಾಗ ಬೇಕೆಂದ ರೀತಿಯಲ್ಲಿ ತಲಾಖ್ ನೀಡುತ್ತಿದ್ದ ಮುಸಲ್ಮಾನರು ಕಾನೂನಿನ ಭಯದಿಂದಾದರೂ ಪತ್ನಿಯರನ್ನು ಗೌರವಯುತವಾಗಿ ಕಾಣುವ, ಅವರೊಟ್ಟಿಗೆ ಜೀವನ ನಡೆಸುವ ಅನಿವಾರ್ಯತೆಗೆ ಸಿಲುಕಿದರು. ಕಾಯಿದೆಯನ್ನು ಉಲ್ಲಂಘಿಸಿದರೆ ಗರಿಷ್ಠ 3 ವರ್ಷದವರೆಗೆ ಜೈಲುಶಿಕ್ಷೆ ಹಾಗೂ ದಂಡವನ್ನು ವಿಧಿಸಬಹುದಾದ್ದರಿಂದ ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಛೇದನಕ್ಕೆ ಒಳಪಡುತ್ತಿದ್ದ ಮುಸಲ್ಮಾನ ಹೆಣ್ಣುಮಕ್ಕಳಿಗೆ ಭದ್ರತೆ ಒದಗಿತು. ಶತಮಾನಗಳಿಂದ ನಡೆದುಬಂದಿದ್ದ ವಿಕೃತ ಪದ್ಧತಿಯೊಂದಕ್ಕೆ ತಿಲಾಂಜಲಿ ನೀಡುವ ಮೂಲಕ ಅವರ ಅತಂತ್ರ ಬದುಕುಗಳಿಗೆ ನೆಲೆ ಒದಗಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಯಿತು.

ಈಗ ತಲಾಖ್ ನಿಷೇಧ ಜಾರಿಗೆ ಬಂದು ವರ್ಷಗಳು ಕಳೆದಿವೆ. ಮುಸಲ್ಮಾನ ಸಮಾಜದ ಪುರುಷಪಾರಮ್ಯಕ್ಕೆ ಸಿಲುಕಿ ನಲುಗುತ್ತಿದ್ದ ಅಸಂಖ್ಯ ಮುಸ್ಲಿಂ ಹೆಣ್ಣುಮಕ್ಕಳ ಬದುಕಿಗೆ ಭರವಸೆ ಒದಗಿದೆ. ತಡವಾಗಿ ಎದ್ದಿದ್ದಕ್ಕೆ, ಉದ್ಯೋಗ ಮಾಡುತ್ತೇನೆಂದಿದ್ದಕ್ಕೆ, ಓದುವ ಹಂಬಲ ತೋರಿದ್ದಕ್ಕೆ, ವರದಕ್ಷಿಣೆ ತರದಿದ್ದಕ್ಕೆ ತಲಾಖಿಗೆ ಬಲಿಯಾಗುತ್ತಿದ್ದ ಗೌಸಿಯಾ ಬೇಗಂ, ಮುಮ್ತಾಜ್, ನಿಹಾರರಂಥ ಲಕ್ಷಾಂತರ ಹೆಣ್ಣುಮಕ್ಕಳು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಸಂವೇದನಾಶೀಲ ಸರ್ಕಾರವೊಂದು ಸಮಾಜಜೀವನವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಮೋದಿ ಸರ್ಕಾರ ತೋರಿಸಿಕೊಟ್ಟಿದೆ. ಇಷ್ಟಾದರೂ ಮೋದಿ ಮುಸ್ಲಿಂ ವಿರೋಧಿ, ಬಿಜೆಪಿ ಕೇವಲ ಹಿಂದೂಗಳ ಪಕ್ಷ, ಬಿಜೆಪಿ ಅಧಿಕಾರಕ್ಕೇರಿದರೆ ಅದು ಮುಸಲ್ಮಾನರ ಸೋಲು ಎಂಬ ತರ್ಕಗಳಿಗೆ ಅನೇಕರು ಜೋತುಬಿದ್ದಿದ್ದಾರೆ. ಆದರೆ ಮೋದಿಯವರು ಮಾತ್ರ ಎಲ್ಲರನ್ನು ಒಗ್ಗೂಡಿಸಿಕೊಂಡು, ಎಲ್ಲರ ಹೃದಯವನ್ನು ಗೆದ್ದು, ಎಲ್ಲರ ಹಿತವನ್ನು ಕಾಯುತ್ತ ತಮ್ಮ ಸಮರ್ಥ ಆಡಳಿತವನ್ನು ಮುಂದುವರೆಸಿದ್ದಾರೆ. ಇದು ಶತಮಾನಗಳ ನಂತರ ಪ್ರಜಾಪ್ರಭುತ್ವಕ್ಕೆ ಒಲಿದ ಗೆಲುವು. ಮತದಾರನ ಮೌಲ್ಯಯುತ ಮತಕ್ಕೆ ದೊರೆತ ಗೆಲುವು!

Author is the Sub Editor of Vikrama Kannada weekly. Views expressed are personal.

Author

(The views expressed are the author's own and do not necessarily reflect the position of the organisation)